ಇರಾಜ್ಮಸ್
1469 ?-1536. ಡಚ್ ಲೇಖಕ, ಸಂಪಾದಕ ಮತ್ತು ಕ್ರೈಸ್ತ ದಾರ್ಶನಿಕ. ಡೆಸಿಡೇರಿಯಸ್ ಇರಾಜ್ಮಸ್ ಎಂಬ ಹೆಸರೂ ಉಂಟು. ಜನನ ರಾಟರ್ ಡಾಂನಲ್ಲಿ. ತಾಯಿ ತಂದೆಗಳ ಬಲವಂತಕ್ಕೆ ಒಳಗಾಗಿ ಆಗಸ್ಟೈನ್ ಪಂಥದಲ್ಲಿ ಸನ್ಯಾಸ ಸ್ವೀಕರಿಸಿದ. ಆದರೆ, ಕೇಂಬ್ರಾಯ್ ಬಿಷಪ್‍ನಿಂದ ಸಹಾಯ ಪಡೆದು ಮೊತ್ತಮೊದಲು ಫ್ರಾನ್ಸಿಗೂ ಅನಂತರ ಯೂರೋಪಿನ ಇತರ ದೇಶಗಳಿಗೂ ಭೇಟಿ ಕೊಟ್ಟ. 1502ರಲ್ಲಿ ಟ್ಯೂರಿನ್ ವಿದ್ಯಾಲಯ ದೈವಶಾಸ್ತ್ರದಲ್ಲಿ ಡಾಕ್ಟರೇಟ್ ಪ್ರಶಸ್ತಿ ಪಡೆದ. ಇಂಗ್ಲೆಂಡಿಗೆ ಅನೇಕ ಸಲ ಭೇಟಿಕೊಟ್ಟ. ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ಲೇಡಿ ಮಾರ್ಗರೇಟ್ ಪುದುವಟ್ಟಿನ ಗ್ರೀಕ್ ಭಾಷಾಪ್ರಾಧ್ಯಾಪಕನಾಗಿ ಕೆಲಸ ಮಾಡಿದ. ಪ್ರಸಿದ್ಧ ವಿದ್ವಾಂಸರಾದ ಸರ್ ಥಾಮಸ್ ಮೋರ್, ಜಾನ್ ಕೋಲೆಟ್ ಮತ್ತು ವಿಲಿಯಂ ಗೊಕೈನ್‍ರು ಇಂಗ್ಲೆಂಡಿನಲ್ಲಿ ಇರಾಜ್ಮಸ್ಸನ ಮಿತ್ರರಾಗಿದ್ದರು. ಆಂಗ್ಲರ ಮುಖ್ಯ ಮಠಾಧೀಶ ವಾರ್ ಹ್ಯಾಮ್ ಈತನಿಗೆ ಕೆಂಟ್ ಪ್ರದೇಶದ ಅಲ್ಲಿಂಗ್ಟನ್ ಪ್ರದೇಶದ ಮತಾಧಿಕಾರ ಕೊಟ್ಟ. ಆ ಪದವಿಯನ್ನು ತ್ಯಾಗಮಾಡಿದ ಅನಂತರವೂ ಆತನಿಗೆ ವಿಶ್ರಾಂತಿವೇತನ ಸಿಗುತ್ತಿತ್ತು. ಇರಾಜ್ಮಸ್ ಮತದ ಪುನ: ಪರಿವರ್ತನೆಯಲ್ಲಿ ಯಾವ ಪಕ್ಷವನ್ನೂ ಪೃಥಕ್ಕರಿಸಲಿಲ್ಲ. ಎಲ್ಲರಿಂದಲೂ ಮಾನ್ಯನಾಗಿ ಮುಖ್ಯವಾಗಿ ವಿದ್ವಾಂಸರ ಪ್ರಶಂಸೆಗೊಳಗಾದವನಾಗಿದ್ದ.

	ಈತ ಹಲವು ಗ್ರಂಥಗಳನ್ನು ಬರೆದಿದ್ದಾನೆ ಜೀವಿತಕಾಲದಲ್ಲಿ ರೋಮನ್ ಕೆಥೊಲಿಕ್ ಪಂಥ ಭಿನ್ನಮತೀಯರನ್ನು ಈತ ಎದುರಿಸಬೇಕಾಗಿತ್ತು. ಆದ್ದರಿಂದ ಮೋರ್ ಮಹಾಶಯನಂತೆ, ಪ್ರತಿಸ್ಪರ್ಧಿ ಖಂಡನಾತ್ಮಕವಾದ ಲೇಖನಗಳನ್ನು ಬರೆದ. ಈತನ ಎಲ್ಲ ಕೃತಿಗಳನ್ನೂ ಬಾಸೆಲ್ಲಿನ ಫೋರ್ಬೆನ್ ಮುದ್ರಣಾಲಯದವರು ಪ್ರಕಟಿಸಿದ್ದಾರೆ. ಆದರೆ, ಅವುಗಳಲ್ಲಿ ಕೆಲವು ಸಂದರ್ಭೋಚಿತವಾದವುಗಳು. ಸರ್ವಕಾಲಕ್ಕೂ ಮಾನ್ಯವಾದಂಥ ಅವನ ಕೆಲವು ಗ್ರಂಥಗಳನ್ನು ಇಲ್ಲಿ ಹೆಸರಿಸಬಹುದು.

	(ಅ) ಇರಾಜ್ಮಸನ ಗ್ರಂಥಗಳಲ್ಲಿ ಸರ್ವಮಾನ್ಯವಾದದ್ದು 1516ರಲ್ಲಿ ಪರಿಷ್ಕರಿಸಿ, ಲ್ಯಾಟಿನ್ ಭಾಷೆಯ ಭಾಷಾಂತರದೊಡನೆ ಪ್ರಕಟಿಸಿದ ಹೊಸ ಒಡಂಬಡಿಕೆ. ಅನೇಕ ಹಸ್ತ ಪ್ರತಿಗಳ ತುಲನೆಯಿಂದಲೂ ವಿವೇಚನೆಯಿಂದಲೂ ರಚಿತವಾದ ಈ ಹೊಸ ಆವೃತ್ತಿ ವಿದ್ವಾಂಸರ ಅವಲೋಕನಕ್ಕೆ ಮತ್ತು ಅಧ್ಯಯನಕ್ಕೆ ಯೋಗ್ಯವಾದುದಾಗಿದೆ. (ಆ) ದಿ ಪ್ರೇಸ್ ಆರ್ಫ ಫಾಲಿ (ಮೌಢ್ಯದ ಹೆಗ್ಗಳಿಕೆ) ಎಂಬುದು 1509ರಲ್ಲಿ ಪ್ರಕಟವಾದ ಮತ್ತೊಂದು ಮೇರುಕೃತಿ. ಇದರಲ್ಲಿ ವಿಡಂಬನೆಯೇ ಪ್ರಧಾನವಾಗಿದೆ. ಸರ್ ಥಾಮಸ್ ಮೋರನ ಪ್ರಚೋದನೆಯ ಕಾರಣವಾಗಿ ಈ ಗ್ರಂಥದ ರಚನೆಯಾಯಿತಂತೆ. (ಇ) ದಿ ಎಜುಕೇಷನ್ ಆಫ್ ಎ ಕ್ರಿಶ್ಚಿಯನ್ ಪ್ರಿನ್ಸ್ (ಕ್ರೈಸ್ತ ಮತಾವಲಂಬಿ ರಾಜಕುಮಾರ ಅನುಸರಿಸಲು ಯೋಗ್ಯವಾದ ವಿದ್ಯಾಭ್ಯಾಸಕ್ರಮ) ಎಂಬುದು ಅವರ ಪಾಂಡಿತ್ಯವನ್ನು ಪ್ರದರ್ಶಿಸುವ ಗ್ರಂಥ. (ಈ) ಗಾದೆಗಳು ಎಂಬ ಗ್ರಂಥ 1500ರಲ್ಲಿ ಪ್ರಕಟವಾಯಿತು. ಈ ಗ್ರಂಥದಲ್ಲಿ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿನ ಗಾದೆಗಳನ್ನು ಸಂಕಲಿಸಲಾಗಿದೆ. ಸಮಕಾಲೀನ ಸಾಹಿತಿಗಳಿಂದ ಈ ಸಂಕಲನ ಗ್ರಂಥ ಮಾನ್ಯತೆ ಪಡೆದಿತ್ತು. ಈ ನಾಲ್ಕು ಗ್ರಂಥಗಳೂ ಅನುಕ್ರಮವಾಗಿ ಕರ್ತೃವಿನ ಹೆಚ್ಚಳವನ್ನು ತೋರಿಸುತ್ತವೆ. ಮತಸುಧಾರಣೆಯ (ರೆಫರ್ ಮೇಷನ್) ಬಗ್ಗೆ ಈತ ತಳೆದ ನಿಲುವಿನಿಂದ ಇವನಿಗೂ ಲೂಥರಿಗೂ ವೈಷಮ್ಯ ಉಂಟಾಯಿತು.						
	(ಕೆ.ಕೆ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ